Saturday, April 4, 2009

ಹೂವು ಚೆಲುವೆಲ್ಲ ನಂದೆಂದಿತು......!


ಮನುಕುಲದ ಜೀವಾಳ ನೀರನ್ನು ಉಳಿಸಿ

ಪೃಥ್ವಿಯನ್ನು ಆವರಿಸಿರುವ ಅತ್ಯಮೂಲ್ಯವಾದ ವಸ್ತು. ಸೌರವ್ಯೂಹದ ಒಂಭತ್ತು ಗ್ರಹಗಳಲ್ಲಿ ಜೀವಿಗಳುಳ್ಳ ಏಕೈಕ ಗ್ರಹ ಪೃಥ್ವಿಯೊಂದೇ ಆಗಿದೆ. ಇದಕ್ಕೆ ಮುಖ್ಯ ಕಾರಣವೇ ನೀರು. ನೀರಿಲ್ಲದೇ ಯಾವುದೇ ಜೀವ ರಾಶಿಗಳು ಬದುಕಿರಲು ಸಾಧ್ಯವೇ ಇಲ್ಲ. ಭೂಮಿಯನ್ನು ಆವರಿಸಿರುವ ನೀರಿನ ಸಮೂಹವನ್ನು ’ಜಲಮಂಡಲ’ ಎಂದು ಕರೆಯವರು. ನೀರಿನ ವೈಜ್ಞಾನಿಕ ಹೆಸರು ’ಊ೨ಔ’. ಅಂದರೆ ಎರಡು ಪ್ರಮಾಣದ ಜಲಜನಕ ಹಾಗೂ ಒಂದು ಪ್ರಮಾಣದ ಆಮ್ಲಜನಕದ ಮಿಶ್ರಣ ಎಂದರ್ಥ.ಪೃಥ್ವಿಯ ಮುಕ್ಕಾಲು ಭಾಗ ನೀರಿನಿಂದಲೇ ಕುಡಿಕೊಂಡಿರುವುದರಿಂದ ಇದನ್ನು ಜಲಾವೃತ ಗ್ರಹವೆಂದು ಕರೆಯುವರು. ಪೃಥ್ವಿಯ ಒಟ್ಟು ವಿಸ್ತೀರ್ಣ ೫೧೦ ದಶ.ಲಕ್ಷ.ಚದರ.ಕಿಲೋ.ಮೀಟರ್. ಇದರಲ್ಲಿ ನೀರಿನಿಂದ ಆವರಿಸಿರುವ ಒಟ್ಟು ಪ್ರದೇಶ ೩೬೧.೮ ದ.ಲ.ಚ.ಕಿ.ಮೀ. ಆದರೆ ಉಳಿದ ೧೪೮.೨ ದ.ಲ.ಚ.ಕಿ.ಮೀ. ಪ್ರದೇಶ ಗಟ್ಟಿಯಾದ ಭೂಮಿಯಿಂದ ಕೂಡಿದೆ. ಭೂಮಿಯನ್ನು ಆವರಿಸಿರುವ ಒಟ್ಟು ಶೇ.೭೦.೮ ರಷ್ಟು ನೀರಿನಲ್ಲಿ ಶೇ.೦.೩ ರಷ್ಟು ಶುದ್ಧರೂಪದಲ್ಲಿದ್ದರೇ ಉಳಿದ ಶೇ.೬೭.೮ ರಷ್ಟು ನೀರು ಅತ್ಯಂತ ಲವಣಯುಕ್ತವಾಗಿದೆ. ಈ ನೀರನ್ನು ನಾವು ಯಾವುದಕ್ಕೂ ಉಪಯೋಗಿಸಲು ಬರುವುದಿಲ್ಲವಾದರೂ ಇದರ ಮಹತ್ವ ಅತೀ ಮುಖ್ಯವಾಗಿದೆ.ಇನ್ನೂ ನಮಗೆ ಲಭ್ಯವಿರುವ ಕುಡಿಯುವ ನೀರಿನಲ್ಲಿ ಶೇ.೮೦ ರಷ್ಟನ್ನು ಕೃಷಿಗಾಗಿ ಬಳಸುತ್ತೇವೆ. ಇನ್ನೂಳಿದ ನೀರನ್ನು ಗೃಹಕೃತ್ಯಕ್ಕೆ, ಕೈಗಾರಿಕೆಗಳಿಗೆ, ವಿದ್ಯುತ್ ತಯಾರಿಕೆಗೆ ಬಳಸುತ್ತೇವೆ. ನಮ್ಮ ಕುಡಿಯುವ ನೀರಿನ ಪ್ರಮುಖ ಆಕರವೆಂದರೆ ಬಾವಿ ಮತ್ತು ಕೊಳವೆ ಬಾವಿಗಳಿಂದ ಹೊರತೆಗೆದು ಬಳಸುವ ಅಂತರ್ಜಲವಾಗಿದೆ.ಆದರೆ, ಆಧುನಿಕತೆಯ ಯುಗದಲ್ಲಿ ತಂತ್ರಜ್ಞಾನ ಬೆಳೆದಂತೆ ಮಾನವನ ದುರಾಸೆ, ಸ್ವಾರ್ಥ ಮನೋಭಾವ, ಪರಿಸರ ಅಪ್ರಜ್ಞೆಯಿಂದಾಗಿ ಹಲವಾರು ಜ್ವಲಂತ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಹಾಗೆಯೇ ಮನುಕುಲದ ಪ್ರಾಣ (ಜೀವ) ನೀರನ್ನು ಮಿತವಾಗಿ ಬಳಸದೇ ಹೆಚ್ಚು-ಹೆಚ್ಚು ಪೋಲು ಮಾಡುವುದರ ಜೊತೆಗೆ ಜೀವಜಲವನ್ನು ಕಲುಷಿತ ಮಾಡುತ್ತಿದ್ದಾರೆ. ಈ ತಪ್ಪಿನಿಂದಾಗಿ ಮಳೆಯ ಪ್ರಮಾಣ ವಿಪರೀತವಾಗಿ ಕುಸಿದು ನೀರಿನ ಕೊರತೆ ಉಂಟಾಗುತ್ತಿದೆ. ಒಂದು ಸಮೀಕ್ಷೆಯ ಪ್ರಕಾರ ’ಒಂದು ಸೆಕೆಂಡಿಗೆ ಒಂದು ಹನಿ ನೀರನ್ನು ನಾವು ದುರ್ಬಳಕೆ ಮಾಡಿಕೊಂಡದ್ದಾದರೆ ನಮ್ಮ ನಲ್ಲಿಗಳಿಂದ ಒಂದು ವರ್ಷಕ್ಕೆ ೪೫ ಸಾವಿರ ಲೀಟರಗಳಷ್ಟು ನೀರು ವ್ಯಯವಾಗಿ ಹೋಗುತ್ತದೆ’ ಎಂದು ಹೇಳಲಾಗಿದೆ.ನಮಗೆಷ್ಟು ನೀರು ಲಭ್ಯವಿದೆ. ಅದನ್ನು ಹೇಗೆ ಬಳಸಬೇಕೆಂಬುವುದರ ಕುರಿತು ಯೋಗ್ಯ ಯೋಜನೆಗಳನ್ನು ನಾವು ಇದುವರೆಗೆ ರೂಪಿಸಿಲ್ಲ ಅಥವಾ ಯೋಚಿಸಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೃಹತ್ ನೀರಾವರಿ ಯೋಜನೆ ಹಾಗೂ ಕುಡಿಯುವ ನೀರಿನ ಯೋಜನೆಗಳನ್ನು ಸ್ವಾತಂತ್ರ್ಯ ನಂತರ ಕೈಗೆತ್ತಿಕೊಂಡು ಪೂರ್ಣಗೊಳಿಸಿದೆ. ಅದಕ್ಕೂ ಮೊದಲು ಹಳ್ಳಿ, ಪಟ್ಟಣಗಳಲ್ಲಿ ವಾಸಿಸುವ ಜನರು ನೀರಿಗಾಗಿ ಸರ್ಕಾರದ ಮೊರೆ ಹೋಗುತ್ತಿರಲಿಲ್ಲ. ಆದರೆ, ಇಂದು ಏನಾಗಿದೆ..? ಕುಡಿಯುವ ನೀರಿಗಾಗಿ ಸಹ ಸರ್ಕಾರವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದಿದೆ.ಪ್ರಮುಖ ಆಣೆಕಟ್ಟುಗಳನ್ನು ನೀರಾವರಿಗಾಗಿಯೇ ನಿರ್ಮಿಸಲಾಗಿದ್ದರೂ ಇತ್ತೀಚೆಗೆ ಮಹಾನಗರಗಳಿಗೆ ನೀರು ಪೂರೈಸಲು ಅವುಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಮಲಪ್ರಭ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ದಿನದಿಂದ-ದಿನಕ್ಕೆ ಜೀವಜಲದ ಮಹತ್ವ ನಮಗೆ ಅರಿವು ಆಗುತ್ತಿದೆ. ಆದರೆ ನೀರನ್ನು ಉಳಿಸಿ, ಬೆಳಸಬೇಕೆಂಬ ’ಜಲ ಸಂರಕ್ಷಣೆಯ’ ಪ್ರಜ್ಞೆ ಮಾತ್ರ ಮೂಡುತ್ತಿಲ್ಲ. ಆದ್ದರಿಂದ ಜನಸಾಮಾನ್ಯರಲ್ಲಿ ಮೊದಲು ಜೀವಜಲದ ಮಹತ್ವ ಮತ್ತು ಅದು ನಮಗೆಷ್ಟು ಅತ್ಯಗತ್ಯ ಎಂಬುದನ್ನು ತಿಳಿ ಹೇಳಿ, ಜಾಗೃತಿ ಮೂಡಿಸಬೇಕಾಗಿದೆ. ಆ ನಿಟ್ಟಿನಲ್ಲಿ ನನ್ನ ಒಂದು ಪುಟ್ಟ ಪ್ರಯತ್ನವಿದು. ಸಮಯವಿದ್ದರೇ ಓದಿರಿ. ಸಾಧ್ಯವಾದರೇ ಜೀವಜಲವನ್ನು ಮಿತವಾಗಿ ಬಳಸಲು ಪ್ರಯತ್ನಿಸಿ, ಇನ್ನೂ ಇಷ್ಟವಾದರೇ ಜಲ ಸಾಕ್ಷರತೆಗೆ ಕೈಜೋಡಿಸಿ...!